ರಾಜಾರಾಮ ಮೋಹನ ರಾಯ್
1772-1833. ಸಮಾಜ ಸುಧಾರಕ, ಶಿಕ್ಷಣ ತಜ್ಞ, ಪತ್ರಿಕೋದ್ಯಮಿ, ಆಧುನಿಕ ಭಾರತದ ಯುಗ ಪ್ರವರ್ತಕ, ಬಂಗಾಲದ ಹೂಗ್ಲಿ ಜಿಲ್ಲೆಯ ರಾಧಾನಗರದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ 1772 ಮೇ 22 ರಂದು ಜನಿಸಿದರು. ಇವರ ಪೂರ್ವಜರು ಬಂಗಾಲ ಮುಸ್ಲಿಮರ ಅಳ್ವಿಕೆಗೆ ಒಳಪಟ್ಟಾಗಿನಿಂದಲೂ ಅಧಿಕಾರಿಗಳಾಗಿದ್ದರು. ಇವರು ಮುತ್ತಜ್ಜ ಕೃಷ್ಣ ಚಂದ್ರಬ್ಯಾನರ್ಜಿ ಬಂಗಾಲದ ನವಾಬಸೇವೆಯಲ್ಲಿದ್ದ ರಾಯ್ ಎಂಬುದು ಈತನಿಗೆ ನವಾಬ ನೀಡಿದ ಬಿರುದು. ಅದು ಅಂದಿನಿಂದಲೂ ಇವರ ಕುಟುಂಬದ ಹೆಸರಿನೊಂದಿಗೆ ಸೇರಿಕೊಂಡು ಬಂತು.
  	
ರಾಮಮೋಹನರಾಯರ ತಂದೆ ರಮಾಕಾಂತರಾಯ್ ಸಂಪ್ರದಾಯಸ್ಥ ಹಿಂದೂವಾಗಿದ್ದು, ಶಾಸ್ತ್ರಗಳನ್ನು ಚಾಚೂತಪ್ಪದೆ ಆಚರಿಸುತ್ತಿದ್ದರು. ತಾಯಿ ತಾರಣೀ ದೇವಿ. ಈಕೆಯೂ ಸಂಪ್ರದಾಯಸ್ಥೆ. ರಾಮಮೋಹನರಾಯ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮನೆಯಲ್ಲಿಯೇ ಪೂರೈಸಿದರು. ಅನಂತರ ಅರಾಬಿಕ್, ಪರ್ಷಿಯನ್ ಭಾಷೆಗಳನ್ನು ಕಲಿಯಲು ಪಟ್ನಕ್ಕೆ ತೆರಳಿದರು. ಆಗಿನ ಕಾಲಕ್ಕೆ ಮಹಮ್ಮದೀಯರ ಆಡಳಿತದಲ್ಲಿ ಕೆಲಸಮಾಡಬೇಕಾದ ಈ ಭಾಷೆಗಳ ಕಲಿಕೆ ಅಗತ್ಯವಾಗಿತ್ತು. ಪರ್ಷಿಯನ್ ಅರಾಬಿಕ್ ಮತ್ತು ಸಂಸ್ಕøತ ಭಾಷೆಗಳನ್ನು ತಾರುಣ್ಯದಲ್ಲಿಯೇ ಅಧ್ಯಯನ ಮಾಡಿದ ಇವರು ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಇಂಗ್ಲಿಷ್ ಓದಲು ಪ್ರಾರಂಭಿಸಿದರು. ಕುರಾನನ್ನು ಅಭ್ಯಾಸಮಾಡಿದರು. ಅದರಲ್ಲಿರುವ ಪ್ರಜಾಪ್ರಭುತ್ವ ತತ್ತ್ವಗಳಿಂದ ಆಕರ್ಷಿತರಾದರು. ಇದರ ಜೊತೆಗೆ ಸೂಫಿ ಸಿದ್ಧಾಂತವೂ ಇವರನ್ನು ಆಕರ್ಷಿಸಿತು. ಇಸ್ಲಾಂಧರ್ಮದಲ್ಲಿ ಮೂರ್ತಿಪೂಜೆ ಇಲ್ಲದಿದ್ದದ್ದು ಇವರಿಗೆ ಮೆಚ್ಚುಗೆ ಆಗಿತ್ತು. ಬಾಲ್ಯದಲ್ಲಿನ ಅನೇಕ ನಂಬಿಕೆಗಳು ನುಚ್ಚುನೂರಾದವು. ಏಕದೇವತಾವಾದದಲ್ಲಿ ನಂಬಿಕೆ ದೃಢವಾಯಿತು. ಇವರೊಬ್ಬ ಅಸಾಮಾನ್ಯ ವಿದ್ಯಾರ್ಥಿಯಾಗಿದ್ದು ತರ್ಕ, ಯೂಕ್ಲಿಡ್, ಆರಿಸ್ಟಾಟಲಿನ ತತ್ತ್ವಶಾಸ್ತ್ರ ಮೊದಲಾದವುಗಳನ್ನು ಅರಗಿಸಿಕೊಂಡರು.
  	
ಪಟ್ನದಿಂದ ಹಿಂದಿರುಗಿದ ಬಳಿಕ ಇವರು ಹಿಂದೂಸಮಾಜದಲ್ಲಿ ಪ್ರಚಲಿತವಿದ್ದ ಮೂರ್ತಿಪೂಜೆ ಮತ್ತು ಮೂಢನಂಬಿಕೆಗಳನ್ನು ಕುರಿತು ಒಂದು ಪುಸ್ತಕವನ್ನು ಬರೆದರು. ಇವರ ತಂದೆಗೆ ಮಗನ ಕ್ರಾಂತಿಕಾರಿ ದೃಷ್ಟಿಕೋನ ಇಷ್ಟವಾಗಲಿಲ್ಲ. ತಂದೆ ಮಕ್ಕಳಿಬ್ಬರಲ್ಲೂ ಮತಭೇದತಲೆದೋರಿದಾಗ ರಾಮಮೋಹನ್ ರಾಯ್ ಮನೆಯಿಂದ ಹೊರನಡೆದರು. ಅನಂತರದ ಭಾರತವು ಹಲವು ಪ್ರಾಂತ್ಯಗಳಲ್ಲಿ ಸಂಚರಿಸಿ ಟಿಬೆಟ್‍ಗೆ ತೆರಳಿದರು. ಟಿಬೆಟಿಯನ್ನರಲ್ಲಿದ್ದ ಮೂರ್ತಿಪೂಜೆಯನ್ನು ಕಂಡು ಟೀಕಿಸಿದರು. ಇದರಿಂದ ಲಾಮಾಗಳ ಅಸಮಾಧಾನಕ್ಕೆ ಗುರಿಯಾದರು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಆಟೊಬಯಾಗ್ರಾಫಿಕಲ್ ಸ್ಕೆಚ್ ಎಂಬ ಕೃತಿ ರಚಿಸಿದರು. ಇದರಲ್ಲಿ ಹಿಂದೂಗಳಲ್ಲಿ ಪ್ರಚಲಿತವಿದ್ದ ಮೂರ್ತಿಪೂಜೆಯನ್ನು ಕಟುವಾಗಿ ಟೀಕಿಸಿದರು. ಅಲೆಮಾರಿ ಜೀವನವನ್ನು ಮುಕ್ತಯಗೊಳಿಸಿ ಸ್ವಗ್ರಾಮಕ್ಕೆ ಹಿಂದಿರುಗಿದರು.
  	
ರಾಮಮೋಹನ್ ರಾಯ್ ಅವರು ಈಸ್ಟ್ ಇಂಡಿಯ ಕಂಪನಿಯಲ್ಲಿ 1803 ರಲ್ಲಿ ಕೆಲಸಕ್ಕೆ ಸೇರಿದರು. ತಾಮಸ್ ವುಡ್‍ಫೋರ್ಡ್ ಎಂಬಾತನ ಮುನ್ಷಿಯಾಗಿ ಮುರ್ಷಿದಾಬಾದಿಗೆ ತೆರಳಿದರು. ಮುರ್ಷಿದಾಬಾದ್ ಆಗ ಮೊಗಲರ ಪ್ರಾಂತ್ಯವಾಗಿದ್ದು ಬಂಗಾಲದ ರಾಜಧಾನಿಯಾಗಿತ್ತು. ಅಲ್ಲಿ ಪರ್ಷಿಯನ್ ಭಾಷೆಯಲ್ಲಿ ತುಲಫ್-ಉಲ್-ಮುವಾಹಿದ್ದೀನ್ (ಏಕದೇವತಾವಾದಕ್ಕೆ ಕಾಣಿಕೆ) ಎಂಬ ಗ್ರಂಥ ರಚಿಸಿದರು. ವಿವಿಧ ಪಂಗಡಗಳಲ್ಲಿ ಆಚರಣೆಯಲ್ಲಿದ್ದ ವಿಗ್ರಹಾರಾಧನೆಯನ್ನು ಖಂಡಿಸುವುದು ಇದರ ಉದ್ದೇಶ. ಇದರ ಮುನ್ನಡಿ ಅರಬ್ಬೀ ಭಾಷೆಯಲ್ಲಿದೆ. ರಾಮ ಮೋಹನ್ ರಾಯ್ ಇಸ್ಲಾಂ, ಕ್ರೈಸ್ತ, ಬೌದ್ಧ, ಹಿಂದೂ ಧರ್ಮಗಳನ್ನು ಆಳವಾಗಿ ಅಧ್ಯಯನ ಮಾಡಿ ಅದರ ತತ್ತ್ವಗಳನ್ನು ಅರಗಿಸಿಕೊಂಡಿದ್ದರು. ಎಲ್ಲ ಧರ್ಮಗಳೂ ದೇವನಿದ್ದಾನೆಂಬ ನಂಬಿಕೆಯಿಂದ ಕೂಡಿದ್ದುವು. ಇದನ್ನು ಅರ್ಥಮಾಡಿಕೊಂಡು ದೇವನೊಬ್ಬನೆ ಎಂಬ ನಂಬಿಕೆಯುಳ್ಳವರಾಗಿ, ಇದನ್ನು ವಿಶ್ವಧರ್ಮವಾಗಿ ಬೆಳೆಸುವಲ್ಲಿ ಇವರು ಆಸಕ್ತಿ ವಹಿಸಿದರು.
  	
ತಾಮಸ್ ವುಡ್‍ಫೋರ್ಡ್ ಅನಾರೋಗ್ಯದಿಂದ ತೆರಳಿದ ಅನಂತರ 1805 ರಲ್ಲಿ ರಾಮಘಡದಲ್ಲಿ ಜಾನ್ ಡಿಗ್ವೀ ಎಂಬಾತನಲ್ಲಿ ಇವರು ಖಾಸಗಿ ಮುನ್ಷಿಯಾದರು. ಭಾಗಲ್‍ಪುರ್, ರಾಮ್‍ಘಡ್‍ಗಳಲ್ಲಿ ಕೆಲಸ ಮಾಡಿದ ಅನಂತರ ಉತ್ತರ ಬಂಗಾಲದ ರಂಗಪುರಕ್ಕೆ ಜಾನ್ ಡಿಗ್ವೀಗೆ ಸಹಾಯಕರಾಗಿ 1809 ರಲ್ಲಿ ಹೋದರು. ಅಲ್ಲಿ 1809 ರಿಂದ 1814ರ ವರೆಗೆ ಇದ್ದರು. ಈ ಸಂದರ್ಭದಲ್ಲಿ ತಮ್ಮ ಬಿಡುವಿನ ವೇಳೆಯನ್ನು ಅಧ್ಯಯನ ಮತ್ತು ವಿಚಾರವಿನಿಮಯಗಳಲ್ಲಿ ಕಳೆದರು. ಇಲ್ಲಯೇ ಇವರಿಗೆ ತಾಂತ್ರಿಕ ಪಾಂಡಿತ್ಯವುಳ್ಳ ಹರಿಹರಾನಂದ ತೀರ್ಥಸ್ವಾಮಿಯವರೊಂದಿಗೆ ಒಡನಾಟ ದೊರೆಯಿತು. ಇವರ ಸಹಾಯದಿಂದ ತಾಂತ್ರಿಕ ಸಾಹಿತ್ಯವನ್ನು ಅಭ್ಯಸಿಸಿದರು. ರಂಗಪುರದಲ್ಲಿದ್ದಾಗ ರಮಮೋಹನರಿಗೆ ಜೈನರ ಸಂಪರ್ಕ ದೊರೆತು ಜೈನಧರ್ಮದ ಕಲ್ಪಸೂತ್ರಗಳನ್ನು ಮತ್ತು ಶಾಸ್ತ್ರಗ್ರಂಥಗಳನ್ನು ಓದುವ ಅವಕಾಶ ಲಭ್ಯವಾಯಿತು. ಡಿಗ್ಬೀ ಇಂಗ್ಲೆಂಡಿನಿಂದ ತಂದ ವಾರ್ತಾಪತ್ರಿಕೆಗಳು ಇವರ ಇಂಗ್ಲಿಷ್ ಭಾಷೆಯ ಜ್ಞಾನವನ್ನು ಹೆಚ್ಚಿಸಿದುವಲ್ಲದೆ ಯುರೋಪಿನ ಮತ್ತು ಇಂಗ್ಲೆಂಡಿನ ರಾಜಕೀಯ ಬೆಳೆವಣಿಗೆಯನ್ನು ಅರಿಯಲು ಸಹಾಯ ಮಾಡಿದವು. ಯುರೋಪಿನಲ್ಲಿ ಬದಲಾದ ರಾಜಕೀಯ ಸ್ಥಿತಿ ಮತ್ತು ಯುರೋಪಿಯನ್ನರಲ್ಲಿ ಮೂಡಿದ್ದ ಸ್ವಾತಂತ್ರ್ಯದ ಕಲ್ಪನೆ ಇವರಿಗೆ ರಾಜಕೀಯದ ಹೆಚ್ಚಿನ ಜ್ಞಾನ ಮೂಡಿಸಿತು.
  	
ಡಿಗ್ಬೀ ಭಾರತವನ್ನು ಬಿಟ್ಟ ಅನಂತರ 1814 ರಲ್ಲಿ ರಾಯ್ ಅವರು ಈಸ್ಟ್ ಇಂಡಿಯ ಕಂಪನಿಯ ನೌಕರಿಗೆ ರಾಜೀನಾಮೆ ನೀಡಿ ಕಲ್ಕತ್ತದಲ್ಲಿ ನೆಲೆಸಿದರು. ತಮ್ಮ ಜೀವನವನ್ನು ಧರ್ಮ ಪ್ರಚಾರಕ್ಕಾಗಿ ಮೀಸಲಿಡಲು ನಿರ್ಧರಿಸಿದರು. ಆಚರಣೆಗಳು, ಮೂಢನಂಬಿಕೆಗಳು ಮತ್ತು ಸಂಪ್ರದಾಯಗಳಿಂದ ಭಾರತದ ನಿಜವಾದ ಸತ್ತ್ವ ಮುಚ್ಚಿಹೋಗಿತ್ತು. ಇದನ್ನು ಹೋಗಲಾಡಿಸಬೇಕೆಂದು ರಾಯ್ ಅವರು ಪ್ರಯತ್ನಿಸಿದರು. ಇವರು ಶಾಸ್ತ್ರಗ್ರಂಥಗಳನ್ನು ನಿರಾಕರಿಸಲಿಲ್ಲ. ಆದರೆ ನಿರಾಕರಿಸುವ ಮೊದಲು ಸತ್ಯಾಸತ್ಯತೆಯನ್ನು ಪರೀಕ್ಷಿಸಿ ನೋಡಬೇಕೆಂದು ಹೇಳಿದರು. 1815 ರಲ್ಲಿ ವೇದಾಂತವನ್ನು ಬಂಗಾಲಿ ಭಾಷೆಗೆ ಅನುವಾದಿಸಿದರು. ಇದರ ಮುನ್ನುಡಿಯಲ್ಲಿ ರಾಯ್ ಅವರು ಶಾಸ್ತ್ರಗಳ ಬಗ್ಗೆ ಹೊಂದಿದ್ದ ಸ್ಪಷ್ಟ ಕಲ್ಪನೆಯ ಚಿತ್ರಣವಿದೆ. ಅನಂತರ ಇವರು ಕೇನೋಪನಿಷತ್ತನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದರು.

  	
1815 ರಲ್ಲಿ ಆತ್ಮೀಯ ಸಭಾ ಎಂಬ ಸಂಘವನ್ನು ಹುಟ್ಟು ಹಾಕಿದರು. ಇದರ ಮೂಲಕ ಹಿಂದೂಗಳಲ್ಲಿದ್ದ ಮೂಢನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಹೆಣ್ಣುಮಕ್ಕಳ ಮಾರಾಟ, ಜಾತಿವ್ಯವಸ್ಥೆ ಮತ್ತು ವೇಶ್ಯಾಪದ್ಧತಿಗಳ ವಿರುದ್ಧ ಸಮರ ಸಾರಿದರು. 1811 ರಲ್ಲಿ ಇವರ ಅಣ್ಣ ಜಗಮೋಹನ್ ಸಾವಿಗೀಡಾದ ಸಂದರ್ಭದಲ್ಲಿ ಆತನ ಹೆಂಡತಿಯನ್ನು ಸತಿಯಾಗಿಸಿದ ರೀತಿ ಇವರ ಮನಸ್ಸಿಗೆ ಆಘಾತವನ್ನುಂಟುಮಾಡಿತು. ವಿಧವೆಯ ಜವಾಬ್ದಾರಿಯನ್ನು ಹೊರಲಾರದ ಮತ್ತು ಕಂದಾಚಾರಗಳಿಂದ ಆಕೆಯನ್ನು ಅನಿಷ್ಟವೆಂದು ಪರಿಗಣಿಸುವ ಹಿಂದೂ ಪದ್ಧತಿಯಿಂದ ನೊಂದುಕೊಂಡರು, ಹೆಣ್ಣು ಮಕ್ಕಳಿಗೆ ಗಂಡನ ಮತ್ತು ತಂದೆಯ ಆಸ್ತಿಯಲ್ಲಿ ಹಕ್ಕಿರಬೇಕು ಮತ್ತು ಸತಿಪದ್ಧತಿ ರದ್ದಾಗಬೆಕೆಂದು ಆತ್ಮೀಯ ಸಭಾದ ಮೂಲಕ ಹೋರಾಟ ನಡೆಸಿದರು. ಆಗ ಹಿಂದೂ ಮೂಲಭೂತವಾದಿಗಳೂ ಇವರು ಸುಧಾರಣೆಗಳನ್ನು ಒಗ್ಗಟ್ಟಾಗಿ ವಿರೋಧಿಸಿದರು. ಮನೋಸ್ಥೆರ್ಯ ಕಳೆದುಕೊಳ್ಳದ ರಾಯ್ ತಮ್ಮ ಹೋರಾಟವನ್ನು ಮುಂದುವರಿಸಿದರು. ತಮಗೆ ಹಿಂದೂ ಧರ್ಮದ ಬಗ್ಗೆ ವಿರೋಧವಿಲ್ಲ. ವಿರೋಧವಿರುವುದು ಮೂಡನಂಬಿಕೆಗಳ ಬಗ್ಗೆ ಎಂಬುದನ್ನು ಸ್ಪಷ್ಟಪಡಿಸಿದರು. ಸಹ ಗಮನದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿದರು. 1820 ರಲ್ಲಿ ಸತಿಸಹಗಮನದ ಬಗ್ಗೆ ಬಂಗಾಲಿಯಲ್ಲಿ ಬರೆದ ಪುಸ್ತಕವನ್ನು ಇಂಗ್ಲಿಷ್‍ಗೆ ಅನುವಾದ ಮಾಡಿದರು. ವೇದಾಂತಶಾಸ್ತ್ರ, ವೇದಾಂತಸಾರವನ್ನು ಬಂಗಾಲಿ ಭಾಷೆಗೆ ಅನುವಾದಿಸಿದರು (1815-16). ವೇದಾಂತವನ್ನು ಇದೇ ಕಾಲದಲ್ಲಿ ಇಂಗ್ಲಿಷ್‍ಗೆ ಅನುವಾದಿಸಿದರು. ಈಷ ಮತ್ತು ಕೇನೋಪನಿಷತ್ತುಗಳನ್ನು ಬಂಗಾಲಿ ಹಾಗೂ ಇಂಗ್ಲಿಷಿಗೆ ; ಮಂಡೂಕ, ಕಠೋಪನಿಷತ್ತುಗಳನ್ನು ಬಂಗಾಲಿ ಭಾಷೆಗೆ ಅನುವಾದಿಸಿದರು (1817). 1823 ರಲ್ಲಿ ದಿ ಎನ್‍ಕ್ರೋಚ್ ಮೆಂಟ್ ಆನ್ ದಿ ರೈಟ್ಸ್ ಆಫ್ ದಿ ಹಿಂದೂ ಫೀಮೇಲ್ ಎಂಬ ಪುಸ್ತಕ ಪ್ರಕಟಿಸಿದರು. ತಮ್ಮ ಅಭಿಪ್ರಾಯವನ್ನು ಈ ಪುಸ್ತಕದಲ್ಲಿ ವ್ಯಕ್ತಪಡಿಸಿದರು. ಮೃತ್ಯುಂಜಯನ ಬಜ್ರಸೂಚಿ ಎಂಬ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದರು (1827). ಇದು ಸಮಾಜದಲ್ಲಿದ್ದ ಜಾತಿ ಪದ್ಧತಿಯನ್ನು ವಿರೋಧಿಸಿತ್ತು.

  	
1821 ರಲ್ಲಿ ಏಕದೇವತಾವಾದಿಗಳು ಕಲ್ಕತ್ತದಲ್ಲಿ ಒಂದು ಸಂಘ ಪ್ರಾರಂಭಿಸಿದರು. ಈ ಸಂಘಕ್ಕೆ ರಾಮಮೋಹನರು ಮಾರ್ಗದರ್ಶನ ನೀಡಿದುದಲ್ಲದೆ ಅನುವಾದವನ್ನು ಕೊಟ್ಟರು. ಜನರಲ್ಲಿ ಜಾಗೃತಿಯನ್ನು ಮೂಡಿಸುವುದು, ವಿದ್ಯಾವಂತರನ್ನಾಗಿ ಮಾಡುವುದು, ಆ ಮೂಲಕ ಮೂಢನಂಬಿಕೆ, ಮತಾಂಧತೆ ಮತ್ತು ಧರ್ಮಾಂಧತೆಯನ್ನು ಹೋಗಲಾಡಿಸುವ ಗುರಿ ಇಟ್ಟುಕೊಂಡಿದ್ದರು.
  	
ಬಂಗಾಲದ ಶ್ರೀರಾಂಪುರ ಎಂಬ ನಗರದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಜನರ ಅಸಹಾಯಕತೆಯನ್ನು ಬಳಸಿಕೊಂಡು ಮತಾಂತರಗೊಳಿಸುವ ಚಟುವಟಿಕೆಯಲ್ಲಿ ತೊಡಗಿದರು. ರಾಮಮೋಹನರು ಎರಡು ಪತ್ರಿಕೆಗಳನ್ನು ಪ್ರಾರಂಭಿಸಿ ಜನರಿಗೆ ಅರಿವನ್ನು ನೀಡುವ ಮತ್ತು ಮಿಷನರಿಗಳು ಜನರಲ್ಲಿ ಬೀರುತ್ತಿದ್ದ ಪ್ರಭಾವವನ್ನು ಟೀಕಿಸುವ ಕೆಲಸ ಮಾಡಿದರು. ವೇದಾಂತ ಮತ್ತು ಉಪನಿಷತ್ತುಗಳಲ್ಲಿದ್ದ ಹಿಂದೂ ಧರ್ಮದ ಸತ್ತ್ವವನ್ನು ಜನರಿಗೆ ಪರಿಚಯಿಸಿದರು.
 	 
ಕ್ರೈಸ್ತ ಧರ್ಮದ ಬಗ್ಗೆ ಇವರು ತಳೆದ ಧೋರಣೆಯನ್ನು ಯುರೋಪ್ ಮತ್ತು ಅಮೆರಿಕದ ಜನರು ಬೆಂಬಲಿಸಿದರು. ರಾಮಮೋಹನರು ವಿಶ್ವಧರ್ಮಿಯಾಗಿದ್ದು ಹಿಂದೂ, ಬೌದ್ಧ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಲ್ಲಿದ್ದ ಏಕತೆಯನ್ನು ಗುರುತಿಸಿದರು. ಪೂರ್ವ ಮತ್ತು ಪಶ್ಚಿಮಗಳ ನಡುವೆ ಶಾಂತಿ ಸ್ಥಾಪಿಸಲು ಧರ್ಮಗಳ ಮಧ್ಯೆ ಸೌಹಾರ್ದತೆಯುತ ಸಂಬಂಧ ಅಗತ್ಯವೆಂದು ಹೇಳಿದರು.
  	
ಕ್ರಿಶ್ಚಿಯನ್ ಮಾದರಿಯ ಏಕದೇವತಾವಾದ ಜನರಲ್ಲಿ ಹೆಚ್ಚಿನ ಪರಿಣಾಮ ಬೀರದೆಂದು ಮನಗಂಡ ಇವರು ಬ್ರಹ್ಮಸಮಾಜ ಸಂಸ್ಥೆಯನ್ನು ಸ್ಥಾಪಿಸಿದರು. (1828). ಶಿಷ್ಯ ತಾರಾಚಂದ್ರ ಚಕ್ರವರ್ತಿ ಇದರ ಪ್ರಥಮ ಕಾರ್ಯದರ್ಶಿ. ಇಲ್ಲಿ ವೇದ ಉಪನಿಷತ್ತುಗಳ ಪಠಣ, ಬ್ರಹ್ಮಸಂಕೀರ್ಣನಗಳು ನಡೆಯುತ್ತಿದ್ದುವು. ಬ್ರಹ್ಮ ಸಮಾಜದ ಸ್ಥಾಪನೆ ಕೆಲವು ಕ್ರಿಶ್ಚಿಯನ್ನರಿಗೆ ಪ್ರಿಯವಾಗದಿದ್ದರೂ ಕಲ್ಕತ್ತೆಯ ವಿದ್ಯಾವಂತರಲ್ಲಿ ಮನ್ನಣೆ ಗಳಿಸಿತು (ನೋಡಿ- ಬ್ರಹ್ಮಸಮಾಜ) ಬ್ರಹ್ಮ ಸಮಾಜಕ್ಕೆ ವಿರೋಧವಾಗಿ ಸನಾತನಿಗಳು ಧರ್ಮಸಭೆ ಎಂಬ ಸಂಘ ಕಟ್ಟಿಕೊಂಡರು. ಆದರೆ ಅದು ಬಹಳದಿನಗಳ ಕಾಲ ಉಳಿಯಲಿಲ್ಲ. ಬ್ರಹ್ಮ ಸಮಾಜ ಒಂದು ಗುಂಪಿನ, ಒಂದು ಧರ್ಮದ ಪ್ರಾರ್ಥನಾ ಮಂದಿರವಾಗಿದೆ ಎಲ್ಲ ಏಕದೇವತಾವಾದಿಗಳ ತಾಣವಾಗಿತ್ತು, ಏಕದೇವತಾವಾದ ಮತ್ತು ವಿಶ್ವಭಾತೃತ್ವ ಇವು ರಾಮ ಮೋಹನರು ಹೊಂದಿದ್ದ ಎರಡು ಗುರಿಗಳು. ಇವರು ತಮ್ಮ ಶಿಷ್ಯರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅವರನ್ನು ಸಹೋದರರೆಂದೇ ಸಂಬೋಧಿಸುತ್ತಿದ್ದರು. 
  	
ರಾಮಮೋಹನರಾಯರ ಕೌಟಂಬಿಕ ಮತ್ತು ವೈವಾಹಿಕ ಜೀವನ ಸುಖಕರವಾಗಿರಲಿಲ್ಲ. ಇವರ ತಂದೆಯ ಆಸ್ತಿಯ ವಿಷಯದಲ್ಲಿ ಅಣ್ಣನ ಮಗ ಗೋವಿಂದ ಪ್ರಸಾದ್ ಕೋರ್ಟ್‍ನಲ್ಲಿ ಮೊಕದ್ದಮೆ ಹೂಡಿದ್ದ. ತಾರಿಣಿದೇವಿಯೊಂದಿಗೂ ಇವರಿಗೆ ಮನಸ್ತಾಪವಿತ್ತು. ಇವರ ಸುಧಾರಣೆಗಳನ್ನು ಕುಟುಂಬದ ಸದಸ್ಯರಾರೂ ಒಪ್ಪಿಕೊಳ್ಳಲಿಲ್ಲ. ಸಂಪ್ರದಾಯಸ್ತ ಮನೆಗಳಲ್ಲಿ ಬೆಳೆದವರಾಗಿದ್ದ ಅವರಾದರೂ ಇವರ ಸುಧಾರಣೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
   	
ರಾಮಮೋಹನರಾಯರು ಸತಿಸಹಗಮನ ವಿರುದ್ಧ ನಡೆಸಿದ ಸತತಹೋರಾಟದ ಪರಿಣಾಮವಾಗಿ 1829 ಡಿಸೆಂಬರ್ 4 ರಂದು ಸತಿಪದ್ಧತಿ ಕಾನೂನು ಬಾಹಿರವೆಂದು ವಿಲಿಯಂ ಬೆಂಟಿಕ್ ಘೋಷಿಸಿದ. ಇದರಿಂದಾಗಿ ಭಾರತೀಯ ಪರಂಪರೆಯ ಒಂದು ಅಮಾನವೀಯ ಅನಿಷ್ಟ ಸಾಮಾಜಿಕ ಪದ್ಧತಿ ಕೊನೆಗೊಂಡಿತು.
   	
ರಾಮಮೋಹನ ರಾಯರಿಗೆ ಭಾರತದ ಬಗ್ಗೆ ಮಾತ್ರವಲ್ಲದೆ ಇತರ ರಾಷ್ಟ್ರಗಳ ಬಗ್ಗೆಯೂ ಪ್ರೀತಿ ಇತ್ತು. ದಕ್ಷಿಣ ಅಮೆರಿಕದಲ್ಲಿದ್ದ ಸ್ಪೇನಿನ ವಸಾಹತುಗಳು ಸ್ವತಂತ್ರವಾದ ಸುದ್ದಿ ಬಂದಾಗ ಇವರು ತಮ್ಮ ಸ್ನೇಹಿತರಿಗೆ ಔತಣಕೂಟ ಏರ್ಪಡಿಸಿದ್ದರು. ಎಲ್ಲ ಧಾರ್ಮಿಕ, ರಾಜಕೀಯ, ಸಾಮಾಜಿಕ ಚಟುವಟಿಕೆಗಳಲ್ಲಿ ಜನತೆಯ ಸ್ವಾತಂತ್ರ್ಯದ ಬಗ್ಗೆ ಇವರಿಗೆ ಕಳಕಳಿ ಇತ್ತು. ಇವರು ಸಂಬದ್ ಕೌಮುದಿ ಮತ್ತು ಮಿರತ್-ಉಲ್-ಅಖ್‍ಬಾರ್ ಎಂಬ ಎರಡು ವಾರ ಪತ್ರಿಕೆಗಳನ್ನೂ ನಡೆಸುತ್ತಿದ್ದರು. ಇವುಗಳಲ್ಲಿ ಜನರ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಮಹತ್ತ್ವ ನೀಡಿದ್ದರು. ಇಂಡಿಯನ್ ಜ್ಯೂರಿ ಬಿಲ್ 1827 ರಲ್ಲಿ ಭಾರತದಲ್ಲಿ ಜಾರಿಗೆ ಬಂತು. ಇದರಲ್ಲಿದ್ದ ನ್ಯೂನತೆಗಳ ಬಗ್ಗೆ ರಾಯ್ ಅವರು ವಿರೋಧ ವ್ಯಕ್ತಪಡಿಸಿದ್ದರು. ಭಾರತದ ಆರ್ಥಿಕ ದುಃಖಸ್ಥಿತಿಯ ನಿವಾರಣೆಗಾಗಿ ಶ್ರಮಿಸಿದರು.
   	
ಹಿಂದೂಗಳ ಉತ್ತರಾಧಿಕಾರ ಹಕ್ಕಿನ ಬಗ್ಗೆ ಬ್ರಿಟಿಷ್ ನ್ಯಾಯಾಧೀಶರು ಡೋಲಾಯಮಾನವಾಗಿ ಸ್ಥಿತಿಯಲ್ಲಿದ್ದಾಗ ರಾಮಮೋಹನರು ದಿ ರೈಟ್ಸ್ ಆಫ್ ಹಿಂದೂಸ್ ಓವರ್ ಆನ್ಸಿಸ್ಟರಲ್ ಪ್ರಾಪರ್ಟಿ ಅಕಾರ್ಡಿಂಗ್ ಟು ದಿ ಲಾ ಆಫ್ ಬೆಂಗಾಲ್ ಎಂಬ ಪುಸ್ತಕವನ್ನು ಹೊರತಂದರು. ಇಲ್ಲಿ ಮಿತಾಕ್ಷರ ಮತ್ತು ದಾಯಾಭಾಗ ಪದ್ಧತಿಯಲ್ಲಿರುವ ವ್ಯತ್ಯಾಸವನ್ನು ವಿವರಿಸಿದ್ದಾರೆ.
  	
ರಾಮಮೋಹನರು 1830 ನವೆಂಬರ್ 15 ರಂದು ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ಇಂಗ್ಲೆಂಡಿಗೆ ಹೊರಡುವ ಸಮಯದಲ್ಲಿ ಮೊಗಲ್ ಚಕ್ರವರ್ತಿ ಇವರಿಗೆ ರಾಜ ಎಂಬ ಬಿರುದನ್ನು ನೀಡಿ, ತಮ್ಮ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡುವ ರಾಯಭಾರಿಯನ್ನಾಗಿ ಪರಿಗಣಿಸಬೇಕೆಂದು ಬ್ರಿಟಿಷ್ ಸರಕಾರಕ್ಕೆ ತಿಳಿಸಿದ. ಭಾರತದಲ್ಲಿದ್ದ ಬ್ರಿಟಿಷ್ ಅಧಿಕಾರಿ ಇದನ್ನು ಮಾನ್ಯಮಾಡಲಿಲ್ಲ. ರಾಮಮೋಹನ ರಾಯರು ಸ್ವಂತ ವೆಚ್ಚದಲ್ಲಿಯೇ ಇಂಗ್ಲೆಂಡಿಗೆ ಹೊರಟರು. ಇಂಗ್ಲೆಂಡಿನ ಹಲವು ಪಟ್ಟಣಗಳನ್ನು ಸಂದರ್ಶಿಸಿದರು. ಹಲವು ಕಡೆಗಳಲ್ಲಿ ತಮ್ಮ ಭಾಷಣಗಳನ್ನು ಮಾಡಿದರು. ಬೈಬಲ್ಲಿನ ಬಗ್ಗೆಯೂ ಇವರು ನೀಡಿದ ಭಾಷಣ ಹಲವರನ್ನು ಆಕರ್ಷಿಸಿತು.
  	
ರಾಮಮೋಹನರಾಯರನ್ನು ಇಂಗ್ಲೆಂಡಿನ ಮಂತ್ರಿಮಂಡಲ ಭಾರತದ ಮೊಗಲ್ ದೊರೆಯ ರಾಯಭಾರಿಯೆಂದು ಮಾನ್ಯನೀಡಿತು. ಮೊಗಲ್ ಚಕ್ರವರ್ತಿ ನೀಡಿದ್ದ ರಾಜ ಎಂಬ ಬಿರುದನ್ನು ಸಹ ಒಪ್ಪಿಕೊಂಡಿತು. ರಾಯ್ ಅವರು ಭಾರತದ ಸಮಸ್ಯೆಗಳನ್ನು ಆಡಳಿತ ನಿಯಂತ್ರಣ ಮಂಡಳಿಗೆ ತಿಳಿಸಿದರು. ಭಾರತದ ಕೃಷಿಕರ ದುಃಖಸ್ಥಿತಿಯನ್ನು ವಿವರಿಸಿದರು. ಕಂದಾಯ ಸಮಸ್ಯೆ ಕುರಿತಂತೆ ಪುಸ್ತಕವೊಂದನ್ನು ಹೊರತಂದರು (1831). ಭಾರತದಲ್ಲಿ ಸಂಗ್ರಹವಾದ ಕಂದಾಯವನ್ನು ಇಂಗ್ಲೆಂಡಿನಲ್ಲಿ ವೆಚ್ಚಮಾಡಬಾರದೆಂದು ಆಗ್ರಹಿಸಿದರು. ಭಾರತದ ನ್ಯಾಯಪದ್ಧತಿಯನ್ನು ಕುರಿತು ಪ್ರಶ್ನೋತ್ತರ ರೂಪದಲ್ಲಿ ಒಂದು ಗ್ರಂಥವನ್ನು ಸೆಪ್ಟೆಂಬರ್‍ನಲ್ಲಿ ಪ್ರಕಟಿಸಿದರು (1831). ಅರ್ಹತೆಯುಳ್ಳ ಭಾರತೀಯರನ್ನು ನ್ಯಾಯಾಂಗದ ಹುದ್ದೆಗಳಿಗೆ ಆಯ್ಕೆ ಮಾಡಬೇಕೆಂಬ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಲೋಕಸೇವಾ ವ್ಯವಸ್ಥೆಯನ್ನು ಸಮರ್ಪಕಗೊಳಿಸಿ ಅರ್ಹರಾದ ಭಾರತೀಯರನ್ನೇ ನೇಮಿಸುವಂತೆ ತಿಳಿಸಿದರು.
  	
ರಾಮಮೋಹನ್ ರಾಯರ ಇಂಗ್ಲೆಂಡಿನ ಪ್ರವಾಸ ಆಶಾದಾಯಕವಾಗಿತ್ತು. ಅಲ್ಲಿ ಮಾಡಬೇಕಾದ ಎಲ್ಲ ಕೆಲಸಗಳನ್ನು ಪೂರೈಸಿದರು. ಆದರೆ ಸ್ವದೇಶಕ್ಕೆ ಮರಳುವ ಭಾಗ್ಯವಿಲ್ಲದಾಯಿತು. ಅನಾರೋಗ್ಯ ಪೀಡಿತರಾಗಿ 1833 ಸೆಪ್ಟೆಂಬರ್ 27 ರಂದು ಬ್ರಿಸ್ಟಲ್‍ನಲ್ಲಿ ಕೊನೆಯುಸಿರೆಳೆದರು. ಇವರ ಅಂತ್ಯಕ್ರಿಯೆ ಅರ್ನೋವೆಲ್ ಸಮಾಧಿ ಸ್ಥಳದಲ್ಲಿ ಹಿಂದೂಧರ್ಮದ ಪ್ರಕಾರವೇ ನಡೆಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ